ಶನಿವಾರ, ನವೆಂಬರ್ 9, 2013

ಮಂಥನ ಸದಸ್ಯರ " ಶಿವಗಂಗೆ-ದೇವರಾಯನ ದುರ್ಗ ಪ್ರವಾಸ "

ಚುಮುಚುಮು ಚಳಿಯಲ್ಲಿ ನವೆಂಬರ್ ತಿಂಗಳ ೯ನೇ ತಾರೀಖು ಶನಿವಾರ, ಒಂದು ದಿನದ ಪ್ರವಾಸ ಕಾರ್ಯಕ್ರಮಕ್ಕೆ ತಯಾರಾಗಿ ಸುಮಾರು ೨೫ ಜನರ ತಂಡ ಬೆಳಗ್ಗೆ ೬ ಗಂಟೆಗೆ ಬಂದು ಸೇರಿದೆವು. ಎಲ್ಲರೂ ಉಭಯ ಕುಶಲೋಪರಿಯೊಂದಿಗೆ  ೬.೩೦ ಕ್ಕೆ ಹೊರಟು ೮ ಕ್ಕೆ ಶಿವಗಂಗೆ ತಲುಪಿದೆವು. ಶಿವಗಂಗೆಯ ಶಂಕರ ಮಠದಲ್ಲಿ ಆಗತಾನೇ ಮಾಡಿದ ಬಿಸಿಬಿಸಿ ಇಡ್ಲಿಯನ್ನು ಸತೀಶ ತಂದಿದ್ದ . ಬೆಳಗ್ಗೆಯ ಉಪಾಹಾರ ಇಡ್ಲಿ, ಚಟ್ನಿ ಹಾಗೂ ಕೇಸರಿ ಬಾತ್, ಕಾಫಿಯನ್ನು ಸೇವಿಸಿ ಶಂಕರ ಮಠದಲ್ಲಿ ಪೂಜೆ ಸಲ್ಲಿಸಿ ನಮ್ಮ ಚಾರಣಕ್ಕೆ ಹೊರಟೆವು. ನಮ್ಮ ತಂಡದಲ್ಲಿ ಸಣ್ಣ ಮಕ್ಕಳಿಂದ ೬೫ ವರ್ಷದವರಗಿನ ಎಲ್ಲರೂ ಇದ್ದೆವು. ಚಾರಣ ಬೆಳಗ್ಗೆ ೯ ಗಂಟೆಗೆ ಪ್ರಾರಂಭವಾಯಿತು.

 ಶಿವಗಂಗೆಯ ಬೆಟ್ಟ ಹತ್ತುವುದೆಂದರೆ ಒಂದು ರೀತಿ TMT test. ಸುಮಾರು ೨೦೦೦ ಮೆಟ್ಟಿಲುಗಳು, ೨ ಕೀ. ಮೀ ದೂರದ ಕಾಲುದಾರಿ ೪೭೫೦ ಅಡಿಗಳ ಎತ್ತರದಲ್ಲಿ ಸ್ಥಾಪಿತವಾದ ಬಸವಣ್ಣನ ದರ್ಶನವೇ ನಮ್ಮ ಟಾಸ್ಕ್. ಎಲ್ಲರೂ ತಾವು ಹತ್ತಬೇಕಾಗಿದ್ದ ಎತ್ತರ ಕಂಡು ಆಗುವುದಿಲ್ಲ ಎಂದೇ ಉದ್ಗಾರ. ಆದರೂ ಯಾರೂ ನಿಲ್ಲಲಿಲ್ಲ ಮಧ್ಯೆಮಧ್ಯೆ ಮಜ್ಜಿಗೆ, ಪಾನೀಯಗಳನ್ನು ಸೇವಿಸಿ ಹತ್ತುತಲೇ ಇದ್ದೆವು, ರವೀಂದ್ರ ಅವರ ತಂದೆ ಶ್ರೀ ರಾಘವೇಂದ್ರ ರಾಯರು ಹಾಗೂ ನಾರಾಯಣ ಪ್ರಕಾಶ ತಾಯಿ ಇಬ್ಬರೂ ವಯಸ್ಸಿನ ಸಮಸ್ಯೆಯಿಂದ  ಒಂದು ಹಂತದಲ್ಲೇ ಕುಳಿತರು. ಚಿದಾನಂದ ಭಟ್ಟರು ಹಾಗೂ ಮಗಳು ಕೃತಿಯ ಒತ್ತಾಸೆಯಿಂದ ಹತ್ತಿದ ಉಷಾ, ಮಗಳು ನವ್ಯಳ ಗಲಾಟೆಯಿಂದ ವಾದಿರಾಜ್ ಸುಮಾರು ೭೫ ಭಾಗಹತ್ತಿ ಉಳಿದರು. (ಒರಳಕಲ್ಲೂ ತೀರ್ಥದ ಮೇಲೆ) ನಂತರದ ಸರದಿ ರಾಘವೇಂದ್ರನದು, ಆರೋಗ್ಯ ಸರಿ ಇಲ್ಲ ಎಂದು ಕೊನೆಯ ೧೦೦ ಮೆಟ್ಟಿಲು ಹತ್ತಲೇ ಇಲ್ಲ. ಅಲ್ಲೇ ನಿದ್ದೆಗೆ ಜಾರಿದ. ಮೇಲೆ ಕುಂಭಿಗೆ ಹತ್ತಿ ಬಸವಣ್ಣನಿಗೆ ಸುತ್ತು ಹಾಕಿ ಶಾಂತಲಾ ಡ್ರಾಪ್ ನಿಂದ ಕೆಳಗೆನೋಡಿ ಅಬ್ಬಾ ಎಂದ ವೀರರು ಮಿಕ್ಕವರು, ಚಿದಾನಂದ ಭಟ್ಟರು, ಕೃತಿ, ಮಂಜುಳಾ, ಅರ್ಚನಾ, ನಾರಾಯಣ ಪ್ರಕಾಶ್, ಕೃಷ್ಣ ಮೂರ್ತಿ ಜೋಯಸ್, ಗಿರೀಶ್, ರವೀಂದ್ರ ಮಗಳು, ಶ್ರೀನಿವಾಸ್, ಮೈತ್ರಿ, ಆರತಿ, ಬನಶ್ರೀ, ವೆಂಕಟೇಶ್, ಲತಾ ಹಾಗೂ ಅರವಿಂದ್ ಇಳಿಯಲು ಪ್ರಾರಂಭಿಸಿ ೨ ಗಂಟೆಗೆ ತಳಮುಟ್ಟಿದೆವು. ನಂತರ ನಮ್ಮ ಪ್ರಯಾಣ ದೇವರಾಯನದುರ್ಗಕ್ಕೆ ಎಲ್ಲರೂ ಹಸಿವೆಯಿಂದಲೇ ೨೫ ಕಿ. ಮೀ. ಪ್ರಯಾಣ ಮಾಡಿದೆವು. ದೇವರಾಯನದುರ್ಗ ಛತ್ರದಲ್ಲಿ ಊಟ ನಮಗಾಗಿ ಕಾಯುತ್ತಿತು.ಆಂಬೊಡೆ, ಒರಳಕಲ್ಲು ಚಿತ್ರಾನ್ನ, ಸಂಡಿಗೆ ಹುಳಿ ಎಲ್ಲವನ್ನು ಗಡದ್ದಾಗಿ ತಿಂದು ಮಲಗಿದೆವು.
ಎಲ್ಲರೂ ನಿದ್ದೆಯನ್ನು ತಪ್ಪಿಸಿ, ಯೋಗಾನರಸಿಂಹ ದೇವರ ಬೆಟ್ಟ ಹತ್ತಿದೆವು. ಅದುಕೂಡ ೨೭೦ ಮೆಟ್ಟಿಲುಗಳು. ಸುಮಾರು ೬ ಗಂಟೆಗೆ ಕೆಳಗಿನ ಭೋಗಾನರಸಿಂಹ ದೇವರ ದರ್ಶನ ನಮ್ಮ ಪ್ರವಾಸ ಕಾರ್ಯಕ್ರಮದ ಕೊನೆಯದು. ೬.೩೦ ಕ್ಕೆ ದೇವರಾಯನದುರ್ಗದಿಂದ ಹೊರಟು ೮.೩೦ ಕ್ಕೆ ನಮ್ಮ ಬಡಾವಣೆಗೆ ತಲುಪುವವವಾರಾಗೆ  ಬಸ್ಸಿನಲ್ಲಿ ಅರಚಾಟ, ಕಿತ್ತಾಟಗಳೊಂದಿಗೆ ಅಂತಾಕ್ಷರಿ ಆಡಿದ್ದೇ ಮಜಾ. ಅಂತೂ ಒಂದು ದಿನದ ಪ್ರವಾಸ ಎಲ್ಲರಿಗೂ ಕಾಲುನೋವಿದ್ದರು ಮನಸ್ಸಿನಲ್ಲಿ ಉಳಿಯುವಂಥದ್ದು ಎಂದೆನಿಸಿತು.













ಭಾನುವಾರ, ಅಕ್ಟೋಬರ್ 20, 2013

ವೆಂಕಟೇಶ್ ಅವರ ಮನೆ ಕಾರ್ಯಕ್ರಮ- ೨೦/೧೦/೨೦೧೩

೨೦ ನೇ ಅಕ್ಟೋಬರ್ ತಿಂಗಳ ಸಂಜೆ ನಮ್ಮ ಬಡಾವಣೆಯ ವೆಂಕಟೇಶ್ ದಂಪತಿಗಳ ಮನೆಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಸುಮಾರು ೭೦ ಜನರು ಸೇರಿದ್ದರು. ಶ್ರೀಮತಿ ಪದ್ಮಿನಿ ವಿನಯ ಶಾಸ್ತ್ರಿಯವರ ಸುಗಮ ಸಂಗೀತ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತು. ಅವರು ಹೇಳಿದ ೫ ಹಾಡುಗಳು ಇಷ್ಟು ಬೇಗಮುಗಿಯಿತೇ ಅನಿಸುವಷ್ಟು ಇಂಪಾಗಿತ್ತು.
ನಂತರದ ಕಾರ್ಯಕ್ರಮ ನೀರಾವರಿ ತಜ್ಞ ನಮ್ಮ ಬಡಾವಣೆಯಲ್ಲೇ ವಾಸವಿರುವ,ಪತ್ರಕರ್ತ,ಆಂಕಣಕಾರ ರಾಧಾಕೃಷ್ಣ ಭಡ್ತಿಯವರ  ಉತ್ತರಾಕಾಂಡದ ಪ್ರತ್ಯಕ್ಷ ಅನುಭವಗಳು. ಅವರು ಅಲಕನಂದಾ, ಭಾಗೀರಥಿ ಮಂದಾಕಿನಿ ನದಿಗಳ ಹರಿವು, ಹರಿವಿನ ಹಿಂದಿರುವ ಹಲವಾರು ವಿಷಯಗಳ ಬಗ್ಗೆ ಕೂಲಂಕಷವಾಗಿ ಉಪಮೆಗಳೊಂದಿಗೆ ವಿವರಿಸಿದಾಗ ಬೆಚ್ಚಿ ಬಿದ್ದೆವು. ಹೀಗೂ ಉಂಟೇ ಅನ್ನಿಸಿತು. ಪ್ರಕೃತಿ ಮುನಿಸಿದರೆ ಏನಾಗಬಹುದೆಂದು ನಮಗೆ ತಿಳಿದಿತ್ತು ಆದರೆ ಸುಮ್ಮನೆ ಪ್ರಕೃತಿ ನಮಗೆ ಕೇಡು ಬಗೆಯುವುದಿಲ್ಲ ಎಂಬ ತಿಳಿವಳಿಕೆಗೆ ಹೇಳಿದರು. ಪ್ರಕೃತಿಗೆ ಆದ, ಆಗುತ್ತಿರುವ ತೊಂದರೆಗಳು ಏನು ಎಂದು ವಿಶದವಾಗಿ ವಿವರಿಸಿದರು. ಜಲ ಪ್ರಳಯದಿಂದಾದ ಅನಾಹುತಗಳು, ಅದಕ್ಕಾಗಿ ಮಾಡಿದ ಪರಿಹಾರಕಾರ್ಯಗಳನ್ನು ತಿಳಿಸಿದಾಗ ಜನ ಅವಾಕ್ಕಾದರು. ಇದರ ಬಗ್ಗೆ ತಿಳಿಸಲು ಒಂದು ಸಪ್ತಾಹವನ್ನಾದರೂ ಏರ್ಪಡಿಸಬೇಕೆಂಬ ತೀರ್ಮಾನದೊಂದಿಗೆ ಮನೆಯೊಡೆಯ ವೆಂಕಟೇಶ್ ಎಲ್ಲರಿಗೂ ವಂದನೆ ಅರ್ಪಿಸಿದರು.ವೆಂಕಟೇಶ್ ಮನೆಯವರ ಆತಿಥ್ಯ  ಒತ್ತು ಶಾವಿಗೆ, ಗಸಗಸೆ ಪಾಯಸ ಇಂದೂ ನಮ್ಮ ನಾಲಿಗೆಯೊಳಗೆ ಬೇರುಬಿಟ್ಟಿದೆ ನಂತರ ಎಲ್ಲರನ್ನೂ ಬೀಳ್ಕೊಟ್ಟಾಗ  ರಾತ್ರಿ ೧೦ ಆಗಿತ್ತು.